ಸಿಂಹಳ ಭಾಷೆ
	ಶ್ರೀಲಂಕಾ ದೇಶದ ಅಧಿಕೃತ ಭಾಷೆ. ಇಂಡೊ-ಆರ್ಯನ್ ಭಾಷಾವರ್ಗಕ್ಕೆ ಸೇರಿದೆ. ಬಂಗಾಲಿ, ಮರಾಠಿ, ಹಿಂದಿ, ಪಂಜಾಬಿ, ದಿವೇಹಿ ಮುಂತಾದ ಭಾಷೆಗಳು ಇಂಡೊ-ಆರ್ಯನ್ ಭಾಷಾವರ್ಗಕ್ಕೆ ಸೇರಿದ ಭಾಷೆಗಳು. ಈ ಎಲ್ಲ ಭಾಷೆಗಳು ಭಾಷಿಕವಾಗಿ ಸಮಾನ ಅಂಶಗಳನ್ನು ಪಡೆದಿರುವಂಥವು. ಸಿಂಹಳ ಭಾಷೆಗೆ ಬಹಳ ಹತ್ತಿರವಾದ ಭಾಷೆಯೆಂದರೆ ಮಾಲ್ಡೀವ್ ದ್ವೀಪಗಳಲ್ಲಿ ಬಳಕೆಯಲ್ಲಿರುವ ದಿವೇಹಿ. ಇದನ್ನು ಬರೆಯಲು ತಾನಾ ಲಿಪಿಯನ್ನು ಬಳಸುವರು. ಈ ಲಿಪಿ ಇಂಡಿಕ್ ಮತ್ತು ಸೆಮಿಟಿಕ್ ಸಂಪ್ರದಾಯಗಳ ಸಮ್ಮಿಶ್ರಣ. ಸಿಂಹಳದಿಂದಲೆ ದಿವೇಹಿ ನಿಷ್ಪನ್ನಗೊಂಡದ್ದು, ಅದು ಸಿಂಹಳದ ಸೋದರ ಭಾಷೆಯೆಂದು ಎಡ್ವರ್ಡ್ ಪೆರೆರಾ, ಜೆ.ಬಿ.ದಿಸ್ಸನಾಯಕೆ, ಡಿ. ಗರುಸಿಂಘೆ, ಡಿ.ಸಿಲ್ವ, ಡಬ್ಲ್ಯೂ.ಎಸ್.ಕರುಣತಿಲಕ, ಎಂ.ಡಿ.ಗುಣಸೇನ, ರೋಹನ್ ಜಯವರ್ದನ ಮೊದಲಾದ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

	ಎಷ್ಟೋ ಆಧುನಿಕ ಯುರೋಪಿಯನ್ ಭಾಷೆಗಳಿಗೆ ಗ್ರೀಕ್ ಮತ್ತು ಲ್ಯಾಟಿನ್ ಮೂಲವಾಗಿರುವಂತೆ, ಸಿಂಹಳ ಮತ್ತಿತರ ಇಂಡೋ-ಆರ್ಯನ್ ಭಾಷೆಗಳಿಗೆ ಮೂಲ ಸಂಸ್ಕøತ ಭಾಷೆಯಾಗಿದೆ.

	ದ್ವೀಪಭಾಷೆಯಾಗಿ ಸಿಂಹಳ ಬೆಳೆದುಬಂದರೂ ಇನ್ನಿತರ ಇಂಡೋ-ಆರ್ಯನ್ ಭಾಷೆಗಳಲ್ಲಿ ಕಾಣಿಸಿಕೊಳ್ಳದ ಹಲವಾರು ವೈಲಕ್ಷಣ್ಯಗಳನ್ನು ಪಡೆದಿದೆ. ಈ ಲಕ್ಷಣಗಳು ದ್ರಾವಿಡ ಮತ್ತು ಮಲಯೋಪಾಲಿನೇಷ್ಯನ್ ಗುಂಪಿಗೆ ಸೇರಿದ ಭಾಷೆಗಳಿಂದ ಬಂದಿವೆ. ದ್ರಾವಿಡ ಗುಂಪಿಗೆ ತಮಿಳು ಭಾಷೆ ಸಿಂಹಳದ ರಚನೆ ಮತ್ತು ಪದಕೋಶದ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಆದುದರಿಂದ ಕೆಲವು ವಿದ್ವಾಂಸರು ಸಿಂಹಳ ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಭಾಷೆಯೆಂದು ಭಾವಿಸುವಂತಾಯಿತು.

	ತನ್ನ ನೆರೆಹೊರೆಯ ಇಂಡೋ-ಆರ್ಯನ್ ಅಥವಾ ದ್ರಾವಿಡ ಭಾಷೆಗಳಲ್ಲಿ ಕಾಣಿಸಿಕೊಳ್ಳದ ಅನೇಕ ಭಾಷಾಂಶಗಳು ಸಿಂಹಳ ಭಾಷೆಯಲ್ಲಿವೆ. ವಿಶೇಷವಾಗಿ ಧ್ವನಿವ್ಯವಸ್ಥೆಯನ್ನು ಗಮನಿಸಬಹುದು. ಈ ಅಂಶಗಳು ಆಫ್ರಿಕನ್ ಅಥವಾ ಪಾಲಿನೇಷ್ಯನ್ ಭಾಷೆಗಳಿಂದ ಬಂದಿರಬಹುದೆಂದು ಊಹಿಸಲಾಗಿದೆ. ಅಲ್ಲದೆ ಡಚ್, ಮಲಯ್, ಪೋರ್ಚುಗೀಸ್ ಮತ್ತು ಇಂಗ್ಲಿಷಿನಿಂದಲೂ ಅನೇಕ ಪದಗಳನ್ನು ಸ್ವೀಕರಿಸಿದೆ. ಇದರಿಂದಾಗಿ ಸಿಂಹಳ ಭಾಷೆಯ ಬೆಳೆವಣಿಗೆ ಸಾಧ್ಯವಾಗಿದೆ.

	ಸಿಂಹಳದಲ್ಲಿ ಹದಿನಾಲ್ಕು ಸ್ವರಧ್ವನಿಗಳಿವೆ. ಈ ಪೈಕಿ ಏಳು ಹ್ರಸ್ವ ಏಳು ದೀರ್ಘಸ್ವರಗಳು. ಇಂಡೋ ಆರ್ಯನ್ ಮತ್ತು ದ್ರಾವಿಡ ಭಾಷೆಗಳಲ್ಲಿಲ್ಲದ ಎರಡು ವಿಶಿಷ್ಟ ಸ್ವರಗಳು ಈ ಭಾಷೆಯಲ್ಲಿವೆ. ಅವು: ಆ್ಯ (x) ಮತ್ತು ಆ್ಯ(ದೀರ್ಘ- xಃ). ಸ್ವರವ್ಯತ್ಯಯದಿಂದಾಗಿ ಈ ಧ್ವನಿಗಳು ಕಾಣಿಸಿಕೊಂಡಿವೆ ಎಂದು ಜರ್ಮನ್ ವಿದ್ವಾಂಸರ ವಾದ.

	ಈ ಭಾಷೆಯಲ್ಲಿರುವ ಇಪ್ಪತ್ತಾರು ವ್ಯಂಜನಧ್ವನಿಗಳಲ್ಲಿ ನಾಲ್ಕು ಪೂರ್ವನಾಸಿಕ ಸ್ಪರ್ಶಧ್ವನಿಗಳಿವೆ. ಅವು mb, ?ಜ, ??, ?g. ಈ ನಾಲ್ಕು ಧ್ವನಿಗಳು ದಿವೇಹಿಯಲ್ಲಿಲ್ಲದೆ ಮತ್ತಾವ ದಕ್ಷಿಣ ಏಷ್ಯಭಾಷೆಗಳಲ್ಲೂ ಕಾಣಿಸಿಕೊಳ್ಳುವುದಿಲ್ಲ. ಇವು ಕೂಡ ಆಫ್ರಿಕನ್ ಅಥವಾ ಪಾಲಿನೇಷ್ಯನ್ ಭಾಷೆಗಳಿಂದ ಬಂದಿರಬಹುದೆಂದು ಊಹಿಸಲಾಗಿದೆ.

	ಸಿಂಹಳದ ಸಾಮಾನ್ಯ ವಾಕ್ಯ ಕರ್ತೃ, ಕರ್ಮ ಮತ್ತು ಕ್ರಿಯಾಪದಗಳಿಂದ ಕೂಡಿದೆ. ಲಿಂಗ, ವಚನ, ವಿಭಕ್ತಿ ವ್ಯವಸ್ಥೆಗಳಲ್ಲಿ ಕರ್ತೃ, ಕ್ರಿಯೆಯೊಂದಿಗೆ ಅನ್ವಯವಾಗುತ್ತದೆ. ಈ ಪ್ರಕ್ರಿಯೆ ಸಾಹಿತ್ಯಕ ಸಿಂಹಳದಲ್ಲಿ ಕಾಣಿಸಿಕೊಳ್ಳುವಂಥದು. ಆದರೆ ಸಿಂಹಳದ ಆಡುನುಡಿಯಲ್ಲಿ ಈ ಪ್ರಕ್ರಿಯೆ ಕಾಣಿಸಿಕೊಳ್ಳುವುದಿಲ್ಲ. 

	ಸಿಂಹಳವನ್ನು ಎಡಗಡೆಯಿಂದ ಬಲಗಡೆಗೆ ಬರೆಯುತ್ತಾರೆ. ಇಂಗ್ಲಿಷಿನಲ್ಲಿರುವಂತೆ ಇದರಲ್ಲಿ ದೊಡ್ಡಕ್ಷರಗಳಿಲ್ಲ (ಕ್ಯಾಪಿಟಲ್ ಲೆಟರ್ಸ್). ಬರೆಹ ವ್ಯವಸ್ಥೆ ಅಕ್ಷರಾತ್ಮಕ(ಸಿಲ್ಯಾಬಿಕ್). ರೋಮನ್ ಲಿಪಿಯಲ್ಲಾದರೆ ಸ್ವರ ಮತ್ತು ವ್ಯಂಜನಗಳು ಬೇರೆ ಬೇರೆ ಘಟಕಗಳು. ಆದರೆ ಅಕ್ಷರಾತ್ಮಕ ಬರೆಹದಲ್ಲಿ ವ್ಯಂಜನದೊಂದಿಗೆ ಸ್ವರವೂ ಸೇರಿಕೊಂಡಿರುತ್ತದೆ. ಒಂದು ಸ್ವರಾಕ್ಷರವೂ ಅನೇಕ ವೇಳೆ ಒಂದು ಅಥವಾ ಹಲವು ವ್ಯಂಜನಾಕ್ಷರವೂ ಉಳ್ಳ ವ್ಯವಸ್ಥೆ ಅಕ್ಷರಾತ್ಮಕವಾದುದು. ಉದಾ: ಕ್+ಅ>ಕ.	

	ಪದಾದಿಯಲ್ಲಿ ಮಾತ್ರ ಸ್ವರಧ್ವನಿ ಪ್ರತ್ಯೇಕ ಅಕ್ಷರವಾಗಿ ಕಾಣಿಸಿಕೊಳ್ಳುತ್ತದೆ. ಪದಮಧ್ಯ, ಪದಾಂತ್ಯಗಳಲ್ಲಿ ಮಾತ್ರ ವ್ಯಂಜನ ಧ್ವನಿಯೊಂದಿಗೆ ಅಂತರ್ಗತವಾಗಿರುತ್ತದೆ. 

	ಎರಡು ಕೇಂದ್ರೀಯ ಸ್ವರಗಳ ಹೊರತಾಗಿ ಸಿಂಹಳದ ಆಡುನುಡಿಯ ಸಾಂಪ್ರದಾಯಿಕ ವರ್ಣಮಾಲೆಯಲ್ಲಿ ನಲವತ್ತು ಧ್ವನಿಗಳಿವೆ. ಸಂಸ್ಕøತ, ಪಾಲಿ, ಪಾಕೃತ ಮೂಲದಿಂದ ಬಂದಿರುವ ಪದಗಳನ್ನು ಬರೆಯಲು ಹದಿನೆಂಟು ಅಧಿಕ ಅಕ್ಷರಗಳನ್ನು ವರ್ಣಮಾಲೆಗೆ ಸೇರಿಸಲಾಗಿದೆ. ಸಿಂಹಳವನ್ನು ಬರೆಯಲು ಬಳಸುವ ಲಿಪಿ, ಪ್ರಾಚೀನ ಬ್ರಾಹ್ಮೀಲಿಪಿಯಿಂದ ವಿಕಾಸಗೊಂಡಿದೆ. ಈ ಲಿಪಿ ಕ್ರಿ.ಪೂ. ಸು. 3ನೆಯ ಶತಮಾನದಿಂದ ಕ್ರಿ.ಶ. 6ನೆಯ ಶತಮಾನದ ಅವಧಿಯಲ್ಲಿ ಶ್ರೀಲಂಕಾ ದ್ವೀಪಕ್ಕೆ ಪರಿಚಯವಾಗಿರಬೇಕೆಂದು ತಜ್ಞರು ಊಹಿಸಿದ್ದಾರೆ. ದ್ರಾವಿಡ ಬರೆಹ ವ್ಯವಸ್ಥೆಯಿಂದಲೂ ಕೆಲವು ಅಕ್ಷರಗಳನ್ನು ಸಿಂಹಳ ಎರವಲು ಪಡೆದಿದೆ. ಸಿಂಹಳ ಭಾಷೆಯಲ್ಲಿ ಮೂಲದಲ್ಲಿದ್ದ ಕೆಲವು ಅಕ್ಷರಗಳು ಕಣ್ಮರೆಯಾಗಿ ಅವುಗಳ ಸ್ಥಾನದಲ್ಲಿ ಕೆಲವು ದ್ರಾವಿಡ ಅಕ್ಷರಗಳು ಸೇರ್ಪಡೆಗೊಂಡಿವೆ.

	ಸಿಂಹಳ ಲಿಪಿ ಧ್ವನ್ಯಾತ್ಮಕವಾದುದು. ಬರೆಯುವಂತೆಯೇ ಉಚ್ಚಾರ ವ್ಯವಸ್ಥೆ ಇರುವಂಥದು.

	ಸಂಸ್ಕøತ, ಪಾಲಿ ಭಾಷಾಪದಗಳು ಸಿಂಹಳದಲ್ಲಿ ತದ್ಭವಗೊಂಡಿವೆ. ಉದಾಹರಣೆಗೆ
ಸಂಸ್ಕøತ	ಪಾಲಿ	ಸಿಂಹಳ	ಅರ್ಥ
ಕರ್ಮನ್	ಕಮ್ಮ	ಕಾಮ್	ಕೆಲಸ
ಮಾರ್ಗ	ಮಗ್ಗ	ಮಗ	ದಾರಿ

	ಸು. 8ನೆಯ ಶತಮಾನದ ಹೊತ್ತಿಗೆ ಪಾಲಿಯ ಛ್ ಧ್ವನಿ ಸ್ ಧ್ವನಿಯಾಗಿ (ಛ್>ಸ್) ಬದಲಾಗಿದೆ. ಈ ಪ್ರಕ್ರಿಯೆ 10ನೆಯ ಶತಮಾನದ ವೇಳೆಗೆ ನಿಯತವಾಯಿತು. ಉದಾಹರಣೆಗೆ

ಪಾಲಿ	ಸಿಂಹಳ	ಅರ್ಥ
ಗಛ್‍ಛ	ಗಸ	ಮರ
ಕುಛ್‍ಛಿ	ಕುಸ	ಗರ್ಭ

ಪಾಲಿ ಮತ್ತು ಸಿಂಹಳದ ಇನ್ನಿತರ ವ್ಯತ್ಯಯಗಳು:

(i)	ಪ್>ವ್
		ಪಾಲಿ	ಸಿಂಹಳ	ಅರ್ಥ
		ರೂಪ	ರೂವ	ರೂಪ
		ಪಾಪ	ಪಾವ	ಪಾಪ
(ii)	ಜ್>ದ್
		ವೆಜ್ಜ	ವೇಧ	ವೈದ್ಯ
		ಅಜ್ಜ	ಅಧ	ಇಂದು/ ಈ ಹೊತ್ತು
(iii)	ತ್>ಲ್
		ಪುತವಿ	ಪಲವ	ಭೂಮಿ
		ಮತ	ಮಲಾ	ನಿಧನ/ಸಾವು

	ದಕ್ಷಿಣ ದ್ರಾವಿಡ ಭಾಷಾವರ್ಗದ ತಮಿಳಿನ ಪ್ರಭಾವವನ್ನು ಸಿಂಹಳದಲ್ಲಿ ಗುರುತಿಸಬಹುದು. ಸು. 11ನೆಯ ಶತಮಾನದ ಹೊತ್ತಿಗೆ ಅನೇಕ ಪದಗಳು ತಮಿಳಿನಿಂದ ಸಿಂಹಳಕ್ಕೆ ಹೋಗಿವೆ. ಉದಾಹರಣೆಗೆ ಪದಕ್ಕಮ್ (ಪದಕ), ಕುಲಪ್ಪು (ರೇಗು, ಕೆರಳು, ಅಶಾಂತಿ), ಕಪ್ಪಮ್ (ಕಪ್ಪಕಾಣಿಕೆ), ಸೆಲ್ಲಮ್ (ಆಟ), ಮಟ್ಟಮ್(ಮಟ್ಟ/ಹಂತ), ಸಲ್ಲಿ(ಹಣ) ಪಡಿ (ಕೂಲಿ), ಕದಿ (ಧ್ವಜ), ಒಪ್ಪು(ಸಾಕ್ಷಿ, ರುಜುವಾತು), ಒಟ್ಟು(ಬೇಹುಗಾರಿಕೆ) ಇತ್ಯಾದಿ.

	ತತ್ಸಮ ಶಬ್ದಗಳೂ ಹಲವಾರಿವೆ. ಉದಾ: ಪ್ರೇಮ, ಭಾಷಾ, ಸುಂದರ, ಮಹಿಳಾ, ಸ್ವರೂಪ, ವಿಪ್ಲವ, ತೃಪ್ತಿ, ಸಂಕಲ್ಪ ಇತ್ಯಾದಿ.

	ಸಂಸ್ಕøತದ ಆಧಾರದಿಂದ ರೂಪುಗೊಂಡ ಸಮಾಸ ಪದಗಳೂ ಹೇರಳವಾಗಿವೆ. 

	ಉದಾ: ಸ್ಥಾನ-ನಾಮ (ಸ್ಥಳನಾಮ), ಶಿಲಾ-ಲಿಪಿ (ಶಿಲಾಲಿಪಿ), ಶಲ್ಯ-ಕರ್ಮ(ಶಸ್ತ್ರಕ್ರಿಯೆ), ಭೂಮಿ-ಕಂಪ(ಭೂಕಂಪನ) ಇತ್ಯಾದಿ.

	ಈ ಎಲ್ಲ ಸ್ವೀಕರಣಗಳಿಂದಾಗಿ ಇಂದಿನ ದಿನಗಳಲ್ಲಿ ಸಿಂಹಳ ಭಾಷೆ ಸಂಪದ್ಭರಿತ ಭಾಷೆಯಾಗಿದೆ. ಐತಿಹಾಸಿಕ ಮತ್ತು ತೌಲನಿಕ ಅಧ್ಯಯನದ ದೃಷ್ಟಿಯಿಂದ ಗಮನಾರ್ಹವಾಗಿದೆ.							
(ಆರ್.ಎಮ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ